ಬಾಹೂರ ಬೊಮ್ಮಣ್ಣ -
12ನೆಯ ಶತಮಾನದ ಶಿವಶರಣ ಹಾಗೂ ವಚನಕಾರ. ಇವನಿಗೆ ಬಾಹೂರ ಬ್ರಹ್ಮಯ್ಯ, ಬಾಹೂರ ಬೊಮ್ಮಯ್ಯ ಎಂಬ ಹೆಸರುಗಳೂ ಇವೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಾಹೂರು ಈತನ ಜನ್ಮಸ್ಥಳ. ಅಲ್ಲಿ ಈತ ತೋಟದ ಕಾಯಕ ಮಾಡಿಕೊಂಡಿದ್ದ. ಬ್ರಹ್ಮೇಶ್ವರಾ ಎಂಬ ಅಂಕಿತವನ್ನಿಟ್ಟು ಕೊಂಡು ವಚನಗಳನ್ನು ಬರೆದಿದ್ದಾನೆ. ಇಲ್ಲಿಯ ತನಕ ಈತನ 35 ವಚನಗಳು ದೊರಕಿವೆ. ಇವುಗಳಲ್ಲಿ ಷಟ್ಸ್ಥಲ ಮಾರ್ಗದ ನಿರೂಪಣೆಯಿದೆ.

ಗಣ ಸಹಸ್ರನಾಮದಲ್ಲಿ ಈತನ ಹೆಸರು ಬಂದಿದೆ. ಹರಿಹರ ಬರೆದಿರುವ ಬಾಹೂರ ಬ್ರಹ್ಮಯ್ಯ ರಗಳೆಯಿಂದ ಈತ ಕಲ್ಯಾಣದ ತ್ರಿಪುರಾಂತಕನ ಭಕ್ತನೆಂದು ತಿಳಿದು ಬರುತ್ತದೆ. ಜೋಳದ ರಾಶಿಯಲ್ಲಿ ಶಿವನನ್ನು ಓ ಎನಿಸಿದ್ದು, ಮದವೇರಿ ನಡೆದ ಆನೆಯನ್ನು 'ಹೋ ನಿಲ್ ಎಂದು ಹೇಳಿ ನಿಲ್ಲಿಸಲು ಅದನ್ನು ಕಂಡ ರಾಜ ಇದು ಮಾಯಾಮಂತ್ರದ ಶಕ್ತಿಯೆಂದು ತೆಗಳಲು, ಆನೆಯನ್ನು ನೂಕಿ ಕೊಂದು ಮತ್ತೆ ಅದನ್ನು ಬದುಕಿಸಿದ್ದು, ಕಲ್ಲುಬಸವನಿಗೆ ಪ್ರಾಣಬರಸಿ ಪೇಟೆಯಲ್ಲಿದ್ದ ಕಬ್ಬನ್ನೆಲ್ಲ ತರಿಸಿ ಮೇಯಿಸಿದ್ದು, ತ್ರಿಪುರಾಂತಕ ಕೆರೆಯ ನೀರಿನಲ್ಲಿ ಅರ್ಧವನ್ನು ಒಂದೇ ಗುಟುಕಿಗೆ ಕುಡಿಸಿದ್ದು-ಇವು ಈತ ನಡೆಸಿದನೆನ್ನಲಾದ ಪವಾಡಗಳು. ಹರಿಹರ ಮತ್ತು ಪಾಲ್ಕುರಿಕೆ ಸೋಮನಾಥರ ಪ್ರಕಾರ ಈತ ಬಸವಣ್ಣನಿಗಿಂತ ಹಿಂದಿನವ ಎನ್ನಲು ಆಸ್ಪದವಿದೆ. ಆದರೆ ಈತ ತನ್ನ ವಚನಗಳಲ್ಲಿ ಬಸವಣ್ಣ, ಚನ್ನಬಸವಣ್ಣ, ಪ್ರಭುದೇವ, ನಿಜಗುಣ, ಅಜಗಣ್ಣ-ಇವರನ್ನು ಹೆಸರಿಸಿರುವುದರಿಂದ ಮೇಲಿನ ಕವಿಗಳು ಹೇಳುವ ಬ್ರಹ್ಮಯ್ಯನಿಗಿಂತ ಈತ ಭಿನ್ನನೆಂದು ಹೇಳಬಹುದಾಗಿದೆ.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ